ಚಿಮಣಿ
ಅವ್ವ ಹಚ್ಯಾಳ ನೋಡು ಚಿಮಣಿ ದೀಪ
ಅದ್ರ ಬುಡಕ ಕುಂತು ನೀ ಓದ್ಕ
ಹೋಗಬ್ಯಾಡ ನೀ ಒಲಿಯ ಬುಡಕ
ಕಟ್ಟಿಗಿ ಒಲಿಯ ಹೊಗಿ ತಾಗ್ಯಾತು
ಮೂಗಿನ ನಡಕ.
ಮಬ್ಬು ಕತ್ತಲಿನ ಬೆಳಕು ಕೋಣಿ ಒಳಗ
ಪುಸ್ತಕದ ಸಾಲು ಕಾಣುತಾವ ತುಸು ಮುಸುಕ
ಅಜ್ಜಿಯ ಗುನುಗು ಹಾಡು ಮೂಲಿ ಇಣುಕ
ಬಿಸಾಕಲ್ಲಿನ ರಾಗ ಸ್ವಲ್ಪ ತಡಕ.
ತಮ್ಮನ ಕಾಲ್ಗೆಜ್ಜೆ ಜಿಣ ಜಿಣಕ ಜಿಣಕ
ಅಪ್ಪ ಬಂದಾನ ಬಾಗಿಲ ಬುಡಕ
ಹೊತ್ತಾತು ಏಳ ಇನ್ನು ತಿನ್ನಾಕ
ಮುಂಜಾನೆ ಎದ್ರಾತು ಓದಾಕ.
ಡಾ.ಅನಪು